ಮಾರ್ಕಂಡೇಯ
ಒಬ್ಬ ಮುನಿ. ಭೃಗು ಮಹರ್ಷಿಯ ವಂಶದವ, ಮೃಕಂಡು ಮುನಿಯ ಮಗ, ಸ್ವಾಯಂಭು. ಮನ್ವಂತರದಲ್ಲಿ ಬ್ರಹ್ಮ ಮಾನಸ ಪುತ್ರನಾದ ಭೃಗು ಮಹರ್ಷಿಯ ಸಂತತಿಯಲ್ಲಿ ಜನಿಸಿದ ಮೃಕಂಡು ಮುನಿಯ ಮಗ, ಈ ಮುನಿಯನ್ನು ಕುರಿತಾಗಿ ಅನೇಕ ಕಥೆಗಳಿವೆ. ಬಹಳ ಕಾಲ ಮಕ್ಕಳಿಲ್ಲದಿದ್ದರಿಂದ ಮೃಕಂಡು ಪುತ್ರಾರ್ಥಿಯಾಗಿ ಪರಮೇಶ್ವರನನ್ನೂ ಕುರಿತು ತಪಸ್ಸು ಮಾಡಿದ. ಅದಕ್ಕೆ ಮೆಚ್ಚಿ ಪ್ರತ್ಯಕ್ಷನಾದ ಪರಶಿವ ಜ್ಞಾನಿ ದೈವಭಕ್ತನಾದ ಅಲ್ಪಾಯುಷಿ ಮಗ ಬೇಕೋ ಧೀರ್ಘಾಯುಷಿ ದಡ್ಡ ಮಗ ಬೇಕೋ ಎಂದು ಕೇಳಿದಾಗ ಮೃಕಂಡು ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನೇ ಬೇಕೆಂದ. ಹೀಗೆ ಅಲ್ಪಾಯುಷಿಯಾಗಿ ಜನಿಸಿದ ಮಾರ್ಕಂಡೇಯ ಶಿವನನ್ನು ಕುರಿತು ತಪಗೈದು ದೀರ್ಘಾಯುಷ್ಯ ಪಡೆದ, ಈತನ ಹೆಂಡತಿ ಧೂರ್ಮೋರ್ಣಿ.

ಪಾಂಡವರು ದ್ವೈತವನದಲ್ಲಿದ್ದಾಗ ಅವರಲ್ಲಿ ಬಂದು ದರ್ಶನಕೊಟ್ಟ. ಪಾಂಡವರು ಕಾಮ್ಯಕವನಕ್ಕೆ ಪ್ರಯಾಣ ಮಾಡಿದಾಗ ಅವರಲ್ಲಿ ಹೋಗಿ ಪುರಾಣ ಪುಣ್ಯ ಕಥೆಗಳನ್ನೂ ಧರ್ಮಶಾಸ್ತ್ರವನ್ನು ಭೋಧಿಸಿದ. ಯುಧಿಷ್ಟಿರನಿಗೆ ಈ ಮುನಿ ಕೃಷ್ಣನ ಮಹಿಮೆಯನ್ನು ವಿಸ್ತಾರವಾಗಿ ತಿಳಿಸಿದ. ನಾರದರೊಂದಿಗೆ ಕೃತ, ತ್ರೈತ, ದ್ವಾಪರ, ಕಲಿಯುಗಗಳ ಧರ್ಮ ವಿಚಾರವಾಗಿ ಚರ್ಚಿಸಿದ. ಸ್ತ್ರೀ ಸಮಸ್ಯೆ ಕುರಿತಂತೆ ಕನ್ಯಾದಾನ ಕಾಲ, ಕನ್ಯಾಧಾತೃ, ಸ್ತ್ರೀಯರ ಗುಣದೋಷಗಳು, ಪಾತಿವೃತ್ಯ ಮುಂತಾದವುಗಳ ಕುರಿತು ನಾರದರೊಂದಿಗೆ ಸಂವಾದ ಮಾಡಿದ. ಮಾರ್ಕಂಡೇಯ ಮುನಿ ಪಕ್ಷಗಳನ್ನು ಕುರಿತು ಜೈಮಿನಿಗೆ ಹೇಳಿದ ಕಥೆ ಮಾರ್ಕಂಡೇಯ ಪುರಾಣ ಎನಿಸಿದೆ. ಇದರಲ್ಲಿ ಪೂರ್ವಜನ್ಮವೃತ್ತಾಂತ, ಇಂದ್ರನ ಬದಲಾವಣೆ, ಪಾಂಡವರ ವೃತ್ತಾಂತ, ಹರಿಶ್ಚಂದ್ರನ ಕಥೆ, ದತ್ತಾತ್ರೇಯ ಕಥೆ, ಸೃಷ್ಟಿ ವಿಷಯ ಇತ್ಯಾದಿಗಳ ನಿರೂಪಣೆಗಳಿವೆ. ಇದು ವ್ಯಾಸರಿಂದ ರಚಿತವಾದ ಹದಿನೆಂಟು ಪುರಾಣಗಳ ಪೈಕಿ ಒಂದು.

ಈ ಮುನಿ ಪರಮಾತ್ಮನನ್ನು ಕುರಿತು ತಪಸ್ಸನ್ನಾಚರಿಸಿ ಭಗವನ್ಮಾಯೆಯನ್ನು ತೋರುವಂತೆ ಪ್ರಾರ್ಥಿಸಿದ. ಈತ ಪುಷ್ಪ ಭದ್ರಾತೀರದಲ್ಲಿ ಕುಳಿತಿದ್ದಂತೆಯೆ ಪ್ರಚಂಡ ಗಾಳಿ, ಬಿಸಿ ಗುಡುಗು ಮಿಂಚುಗಳಿಂದ ಕೂಡಿದ ಪ್ರಬಲ ಮಳೆ ಸುರಿಯಲಾರಂಭಿಸಿತು. ಪ್ರಳಯಾಂತಕವಾದ ಈ ಮಳೆಯಲ್ಲಿ ದಿಕ್ಕೆ ತೋಚದೆ ಸಾವಿರಾರು ವರ್ಷಗಳನ್ನು ಕಳೆದ, ಹೀಗೆ ಅಲೆದಾಡುತ್ತಿದ್ದಾಗ ಒಮ್ಮೆ ಆಲದಮರದಲ್ಲಿ ಆಲದೆಲೆಯ ಮೇಲೆ ಮಲಗಿ ತನ್ನ ಕಾಲುಬೆರಳು ಚೀಪುತ್ತಿರುವ ಸುಂದರ ಶಿಶುವೊಂದನ್ನು ಕಂಡ. ಇದರಿಂದ ಆಯಾಸ ಪರಿಹಾರವಾದಂತಾಗಿ ಶಿಶುವನ್ನು ಸಮೀಪಿಸಿದಾಗ ಅದರ ಶ್ವಾಸಕ್ಕೆ ಸಿಕ್ಕ ಮುನಿ ಆ ಶಿಶುವಿನ ಶರೀರದೊಳಕ್ಕೆ ಹೋದ, ಅಲ್ಲಿ ಚರಾಚರ ಜಗತ್ತನ್ನು ಪುಷ್ಪ ಭದ್ರಾ ತೀರದಲ್ಲಿರುವ ತನ್ನ ಆಶ್ರಮವನ್ನು ಕಂಡ. ನಿಶ್ವಾಸದಿಂದ ಹೊರಕ್ಕೆ ಬಂದ, ಆಗ ಶಿಶುವನ್ನು ಆಲಂಗಿಸಲು ಅದನ್ನು ಸಮೀಪಿಸಿದಾಗ ಪರಮಾತ್ಮ ಅಂತರ್ಧಾನನಾದ. ಲೋಕವನ್ನು ಆವರಿಸಿದ್ದ ನೀರೆಲ್ಲ ಮಾಯವಾಗಿ ಮುನಿ ಮೊದಲಿನಂತೆ ತನ್ನ ಆಶ್ರಮದಲ್ಲೆ ಕುಳಿತಿದ್ದ. ಹೀಗೆ ಮುನಿಗೆ ವಿಷ್ಣು ಪ್ರಳಯವನ್ನು ತೋರಿಸಿದ. ಗೋಮತಿ ಮತ್ತು ಸರಯೂ ನದಿಗಳ ಸಂಗಮ ಸ್ಥಳದ ಭಾಗೇಶ್ವರದ ಬಳಿ ಮಾರ್ಕಂಡೇಯಾಶ್ರಮ ಇದೆ.
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ